ಸ್ಲೊವಾಕಿಯಾದ ಪ್ರಧಾನಿ ರಾಬರ್ಟ್ ಫಿಕೊ ಅವರ ಮೇಲೆ ಗುಂಡಿನ ದಾಳಿ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಗುಂಡಿನ ದಾಳಿ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿತಕಿತ್ಸೆ ಪಡೆಯುತ್ತಿದ್ದಾರೆ.
ಸೆಂಟ್ರಲ್ ಸ್ಲೊವಾಕಿಯಾದಲ್ಲಿ ಗುಂಡಿನ ದಾಳಿ ವಿಡಿಯೋ ವೈರಲ್ ಆಗಿದೆ. ಭದ್ರತಾ ಪಡೆಗಳು ಗಾಯಗೊಂಡ ಪ್ರಧಾನಿ ಫಿಕೋರನ್ನು ಎತ್ತಿ ಕಾರಿನಲ್ಲಿ ಕೂರಿಸುತ್ತಿರುವುದನ್ನು ನೋಡಬಹುದು. ಗುಂಡಿನ ದಾಳಿ ಮಾಡಿದ ಆರೋಪಿಯನ್ನು ಸ್ಥಳದಲ್ಲೇ ಬಂಧಿಸಿರುವ ದೃಶ್ಯಗಳು ಕೂಡ ಸೆರೆಯಾಗಿವೆ.
ನಿನ್ನೆ ಕ್ಯಾಬಿನೆಟ್ ಸಭೆ ಬಳಿಕ ಕಾರು ಹತ್ತಲು ಹೊರಗೆ ಬಂದ ರಾಬರ್ಟ್ ಫಿಕೊ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಅವರ ಮೇಲೆ ಅನೇಕ ಬಾರಿ ಗುಂಡು ಹಾರಿಸಲಾಯಿತು. ಇದರಿಂದ ಅವರು ಗಂಭೀರವಾಗಿ ಗಾಯಗೊಂಡರು. ಇದೀಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಗೆ ಯುರೋಪ್ ಬೆಚ್ಚಿಬಿದ್ದಿದೆ.
ದಾಳಿಯ ಬಗ್ಗೆ ಖಂಡನೆ ಸ್ಲೊವಾಕಿಯಾ ಅಧ್ಯಕ್ಷ-ಚುನಾಯಿತ ಮತ್ತು ಫಿಕೊ ಮಿತ್ರ ಪೀಟರ್ ಪೆಲ್ಲೆಗ್ರಿನಿ ಅವರು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. “ಉನ್ನತ ಸಾಂವಿಧಾನಿಕ ಅಧಿಕಾರಿಗಳಲ್ಲಿ ಒಬ್ಬರ ಮೇಲಿನ ಹತ್ಯೆಯ ಪ್ರಯತ್ನವು ಸ್ಲೋವಾಕ್ ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಯೂರೋಪ್ ಒಕ್ಕೂಟದ ಮುಖ್ಯಸ್ಥ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು “ನೀಚ ದಾಳಿ” ಯನ್ನು ಖಂಡಿಸಿದ್ದಾರೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ “ಭಯಾನಕ” ಗುಂಡಿನ ದಾಳಿಯನ್ನು ಖಂಡಿಸಿದರು ಮತ್ತು ಫಿಕೊ ಚೇತರಿಸಿಕೊಳ್ಳಬೇಕೆಂದು ಹಾರೈಸಿದರು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಗುಂಡಿನ ದಾಳಿಯನ್ನು “ಘೋರ ಅಪರಾಧ” ಎಂದು ಕರೆದಿದ್ದಾರೆ.