ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೊತ್ತೊಯ್ದ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಸುದೀರ್ಘ ದಿನಗಳ ಬಳಿಕ ಭೂಮಿಯಲ್ಲಿ ಲ್ಯಾಂಡ್ ಆಗಿದೆ. ಆದರೆ ಸುನೀತಾ ವಿಲಿಯಮ್ಸ್ ಇಲ್ಲದೆ ನೌಕೆ ಭೂಮಿಯಲ್ಲಿ ಇಳಿದಿದೆ.
ವಾಷಿಂಗ್ಟನ್(ಸೆ.07) ಭಾರಿ ಸದ್ದು ಮಾಡಿದ ಬಾಹ್ಯಾಕಾಶ ನೌಕೆ ಬೋಯಿಂಗ್ ಸ್ಟಾರ್‌ಲೈನರ್ ಯಶಸ್ವಿಯಾಗಿ ಭೂಮಿಯಲ್ಲಿ ಲ್ಯಾಂಡ್ ಆಗಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ನೇರವಾಗಿ ಭೂಮಿಗೆ ಆಗಮಿಸಿದೆ. ಆದರೆ ಭಾರತದ ಮೂಲದ ಅಮೆರಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಇಲ್ಲದೆ ಈ ಬಾಹ್ಯಾಕಾಶ ನೌಕೆ ಲ್ಯಾಂಡ್ ಆಗಿದೆ. ಇಂದು ಬೆಳಗ್ಗೆ ಮೆಕ್ಸಿಕೋದ ಸ್ಪೇಸ್ ಹಾರ್ಬರ್‌ನಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ಲ್ಯಾಂಡ್ ಆಗಿದೆ. ನೌಕೆಯ ತಾಂತ್ರಿಕ ದೋಷದ ಕಾರಣ ಸುನೀತಾ ವಿಲಿಯಮ್ಸ್ ಹಾಗೂ ಮತ್ತೋರ್ವ ಗಗನಯಾತ್ರಿ ಬಚ್ ವಿಲ್ಮೋರ್ ಬಾಹ್ಯಾಕಾಶ ನಿಲ್ದಾಣದಲ್ಲೇ ಉಳಿದುಕೊಂಡಿದ್ದಾರೆ
ನಾಸಾ ಪ್ರಕಾರ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ 2025ರ ಫೆಬ್ರವರಿ ವರೆಗೆ ಬಾಹ್ಯಾಕಾಶದಲ್ಲೇ ಉಳಿದುಕೊಳ್ಳಲಿದ್ದಾರೆ. ಗಗನಯಾತ್ರಿಗಳ ಸುರಕ್ಷತೆ ದೃಷ್ಟಿಯಿಂದ ನಾಸಾ ವಿಜ್ಞಾನಿಗಳು ನಿರ್ಧಾರ ತೆಗೆದುಕೊಂಡಿದ್ದಾರೆ. ಜೂನ್ 5 ರಂದು ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆ ಉಡಾವಣೆಯಾಗಿತ್ತು. ಸುನೀತಾ ಹಾಗೂ ವಿಲ್ಮೋರ್ ಇಬ್ಬರನ್ನು ಹೊತ್ತು ಬಾಹ್ಯಾಕಾಶಕ್ಕೆ ಹಾರಿದ ನೌಕೆ, ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿತ್ತು.
ಸ್ಟಾರ್‌ಲೈನರ್ ನೌಕೆಯಲ್ಲಿ ಹಿಲಿಯಂ ಸೋರಿಕೆ ಆಗಿ ಭಾರಿ ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ಗಗನಯಾತ್ರಿಗಳು ಸುರಕ್ಷಿತವಾಗಿ ಮರಳಲು ಸಾಧ್ಯವಿಲ್ಲ ಎಂದು ವಿಜ್ಞಾನಿಗಳು ಸೂಚಿಸಿದ್ದರು. ಗಗನಯಾತ್ರಿ ಕಲ್ಪನಾ ಚಾವ್ಲಾ ಘಚನೆಯಿಂದ ಎಚ್ಚೆತ್ತುಕೊಂಡಿರುವ ನಾಸಾ ವಿಜ್ಞಾನಿಗಳು ಈ ಬಾರಿ ಕೇವಲ ಬಾಹ್ಯಾಕಾಶ ನೌಕೆಯನ್ನು ಲ್ಯಾಂಡ್ ಮಾಡಿಸಿದ್ದಾರೆ.
: 2025ರ ಫೆಬ್ರವರಿ ವೇಳೆಗೆ ಸ್ಪೇಸ್ ಎಕ್ಸ್ ನೌಕೆ ಬಾಹ್ಯಾಕಾಶಕ್ಕೆ ತೆರಳಲಿದೆ. ಈ ನೌಕೆಯಲ್ಲಿ ಸುನೀತಾ ವಿಲಿಯಮ್ಸ್ ಹಾಗೂ ಬಚ್ ವಿಲ್ಮೋರ್ ಕರೆತರಲಾಗುತ್ತದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ. 10 ದಿನ ಬಾಹ್ಯಾಕಾಶ ಅಧ್ಯಯನಕ್ಕೆ ತೆರಳಿದ್ದ ಸುನೀತಾ ವಿಲಿಯಮ್ಸ್ ಹಾಗೂ ವಿಲ್ಮೋರ್ ಇದೀಗ ಬಾಹ್ಯಾಕಾಶದಲ್ಲೇ ಉಳಿದುಕೊಳ್ಳಬೇಕಾಗಿದೆ.
ಇದು ಸುನೀತಾ ವಿಲಿಯಮ್ಸ್ ಮೂರನೇ ಬಾಹ್ಯಾಕಾಶ ಯಾತ್ರೆಯಾಗಿದೆ. ಗುರುತ್ವಾಕರ್ಷಣೆ ಬಲ ಮೀರಿ, ಗಿಡಗಳಿಗ ನೀರುವಣಿಸುವ ಕುರಿತು ಸಂಶೋಧನೆ ಪ್ರಯುಕ್ತ ಬಾಹ್ಯಾಕಾಶಕ್ಕೆ ತೆರಳಿದ್ದ ಸುನೀತಾ ವಿಲಿಯಮ್ಸ್ ಇದೀಗ ಸಂಶೋಧನೆ ಯಶಸ್ವಿಯಾಗಿ ಪೂರ್ಣಗೊಳಿಸಿದರೂ ಮರಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಸ್ಟಾರ್‌ಲೈನರ್ ನೌಕೆ ಉಡಾವಣೆಗೂ ಮೊದಲೇ ಹೀಲಿಯಂ ಲೀಕ್ ಆಗಿತ್ತು. ಆರಂಭಿಕ 2 ಬಾರಿ ಈ ರೀತಿ ಲೀಕ್ ಸಮಸ್ಯೆ ಕಾಣಿಸಿಕೊಂಡಿತ್ತು. ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಗಗನಯಾತ್ರೆ ಕೈಗೊಂಡಿದ್ದರು.