ಕಾಯಕ-ದಾನ-ದಾಸೋಹಗಳ ಮಹತ್ವ ಸಾರುವ ಹಬ್ಬಗಳ ತ್ರಿವೇಣಿ ಸಂಗಮ

Vijayanagara Vani
ಕಾಯಕ-ದಾನ-ದಾಸೋಹಗಳ ಮಹತ್ವ ಸಾರುವ ಹಬ್ಬಗಳ ತ್ರಿವೇಣಿ ಸಂಗಮ

ವೈಶಾಖ ಮಾಸ ಅಂದರೇನೆ ಅದು ಶಾಖದ ಮಾಸ, ರಣ ರಣ ಬಿಸಿಲಿನ ಅಬ್ಬರ, ಚುನಾವಣೆಗೆ ನಿಂತ ನಾಯಕರಂತೆ  ಸೂರ್ಯನೂ  ಚುನವಣಾ ಪ್ರವಾರಕ್ಕೆಂದು  ತನ್ನ ಬೆಂಬಲಿಗರನ್ನು ಕರೆದುಕೊಂಡು ರೋಡ್ ಶೋ ಮಾಡುತ್ತಿದ್ದಾನೆ.  ಈತನ ಅಬ್ಬರ, ಸೆಕೆಯ ಉಬ್ಬರ ಒಂದೆಡೆಯಾದರೆ, ಕಾರ್ಮಿಕರು ತಮಗಾಗುತ್ತಿರುವ ಅನ್ಯಾಯ ಸರಿಪಡಿಸಿ ಎಂದು ಕೆಂಪು ಬಾವುಟ ಹಿಡಿದು ಹೋರಾಟ ಮಾಡುವ ದೃಶ್ಯಗಳು ಇನ್ನೊಂದೆಡೆ, ಮತ್ತೊಂದೆಡೆ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಹಣ ಆಂತಸ್ತು ,ಹೆಂಡ, ಸರಾಯಿಗಳ ಮೆರವಣಿಗೆ, ಆ ಪಕ್ಷದಿಂದ ಈ ಪಕ್ಷಕ್ಕೆ  ಈ ಪಕ್ಷದಿಂದ ಆ ಪಕ್ಷಕ್ಕೆ ,ಹಳ್ಳಿಯಿಂದ ದಿಲ್ಲಿಗೆ, ದಿಲ್ಲಿಯಿಂದ ಹಳ್ಳಿಗೆ ನೆಗೆತ ಜಿಗಿತ. ಬದ್ದ ವೈರಿಗಳು ಆಪ್ತರಾಗಿ, ಆಪ್ತರು ಕಡು ವೈರಿಗಳಾಗಿ ಪರಸ್ಪರ ನಿಂದೆ ಬೈಗುಳ ತೋಳೇರಿಸುವ ದೃಶ್ಯಗಳು ಸರ್ವೇಸಾಮಾನ್ಯವಾಗಿದೆ. ಈ ಮದ್ಯ ನಾಯಕರುಗಳು ಕಾರಿನಲ್ಲೋ ಜೆಸಿಬಿಯಲ್ಲೋ ಬಂಡಿಯಲ್ಲೋ  ಅಟೋದಲ್ಲೋ ಕಾಲ್ನಡಿಗೆಯಲ್ಲೋ ತಮ್ಮ ಬೆಂಬಲಿಗರೊಂದಿಗೆ ಬಂದು ರೋಡ್ ಶೋ  ಮಾಡುವ ಮೂಲಕ ತಮ್ಮ ಶಕ್ತಿಯ ವಿರಾಡ್ರೂಪ ಪ್ರದರ್ಶಿಸುತ್ತಿದ್ದಾರೆ ಇವರ ಈ ಅಬ್ಬರದ ಪ್ರಚಾರದ ನಡುವೆ ಕಾರ್ಮಿಕರ ದಿನಾಚರಣೆ, ಬಸವ ಜಯಂತಿ ಹಬ್ಬಗಳು ಇಣುಕಿ ಹಾಕಿವೆ, ಅಬ್ಬರದ ಅಲೆಯಲಿ ದ್ವನಿ ಕಳೆದುಕೊಂಡ ತಬ್ಬಲಿಯಂತೆ ಈ  ಹಬ್ಬಗಳು ಬಂದಿದೆ. ಚುನಾವಣೆಯ ಬಿಸಿಯಲಿ ಬಸವಳಿದ ಕನ್ನಡಿಗರೆ ಬನ್ನಿ ಮಾವು-ಬೇವಿನ ಮರಗಳ ನೆರಳಲ್ಲಿ  ಕುಳಿತು ಈ ಹಬ್ಬಗಳ ಮಹತ್ವ ತಿಳಿಯೋಣ ಈ ಹಬ್ಬವು ಸಾರುವ ಸಂದೇಶದ ಬೆಳಕಿನಲ್ಲಿ ಮತದಾನದ ಹಬ್ಬವನ್ನು ಆಚರಿಸೋಣ.

ಕಾಯಕವೇ ಕೈಲಾಸವೆಂದವರು ಕಾರ್ಮಿಕರು

ವಿಶ್ವದ ಕಾರ್ಮಿಕರೆಲ್ಲಾ ತಮ್ಮ ಹೋರಾಟದ ಮೂಲಕ ತಮ್ಮ ದುಡಿಮೆಗೆ ತಕ್ಕ ಪ್ರತಿಫಲವನ್ನು ತಮ್ಮ ಹಕ್ಕು ಬಾದ್ಯತೆಗಳನ್ನು ಸಮಂಜಸ ಸಮಯವನ್ನು  ನ್ಯಾಯಯುತ ವೇತನವನ್ನು ಪಡೆದ ದಿನವೇ ಮೇ ೧ ಇದನ್ನು ಅಂತರಾಷ್ರ್ಟೀಯ ಕಾರ್ಮಿಕರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ.  ಈ ದಿನದಂದು ಕಾರ್ಮಿಕರ ಕೊಡುಗೆಯನ್ನು ಗೌರವಿಸಲಾಗುತ್ತದೆ. ಕಾಮಿಕರೆಂದರೆ ಅವರು ಶ್ರಮಜೀವಿಗಳು, ಎಂಥಹ ಕಷ್ಟದ ಕೆಲಸವಾಗಿದ್ದರೂ ಅದನ್ನು ನಗು ನಗುತ್ತಲೇ ನಿರ್ವಹಿಸಿ, ತಮ್ಮ ಕಾಯಕದಲ್ಲೇ ದೇವರನ್ನು ಕಂಡವರು.ಒಂದು ಕಟ್ಟಡ ಭದ್ರವಾಗಿ ನಿಲ್ಲಬೇಕೆಂದರೆ ಅದರ ಬುನಾದಿ ಭದ್ರವಾಗಿರಬೇಕಲ್ಲವೇ? ಅಂತಯೇ ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಆ ದೇಶ ದುಡಿಯುವ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಕಾರ್ಮಿಕರ ಸೌಖ್ಯವೇ ದೇಶದ ಸೌಖ್ಯ ಎಂದು ಭಾವಿಸಬೇಕು. ಎಲ್ಲಿಯವರೆಗೆ ದೇಶ ಶ್ರಮಿಕರನ್ನು  ಗೌರವಿಸುವುದಿಲ್ಲವೋ ಅಲ್ಲಿಯವರಗೆ ಆ ದೇಶ ಪ್ರಗತಿ ಕಾಣುವುದು ಅಸಾದ್ಯ. ಪ್ರಾಥಿಸುವ ತುಟಿಗಳಿಗಿಂತ ಕೆಲಸ ಮಾಡುವ ಕೈಗಳೇ ಶ್ರೇಷ್ಢ. ಈ ಮಾತಿನಲ್ಲಿ ಎಂಥಹ ಮಾರ್ಮಿಕತೆ ಅಡಗಿದೆ! ತಮ್ಮ ಪಾಲಿನ ಕಾಯಕವನ್ನು ಮಾಡದೇ ಸದಾ ಅವರಿವರನ್ನು ಹೊಗಳಿಕೊಂಡು ತಿರುಗಾಡುವ ಜನರಿಗಿಂತ ದುಡಿಮೆಯಲ್ಲಿಯೇ ದೇವರನ್ನು ಕಂಡ ಜನರೇ  ಶ್ರೇಷ್ಠರಲ್ಲವೇ ಅದಕ್ಕೆ ಸಿದ್ದಯ್ಯ ಪುರಾಣಿಕರು ಹೇಳಿದ್ದು ದುಡಿಯುವ ಕೈಗಳಿಗೆ ನಾನು ನಮೋ ಎನ್ನುವೆ ಎಂದು ಹೌದು ನಾವು ನಮಸ್ಕರಿಸ ಬೇಕಾಗಿದ್ದು ದುಡಿಯುವ ,ಹೊಲ ಉತ್ತುವ  ಬಿತ್ತುವ ,ಸಿಮೆಂಟ್ ಕಲಸುವ,  ಚಪ್ಪಲಿ ಹೊಲಿಯುವ ಬಟ್ಟೆ ನೇಯುವ, ಬುಟ್ಟಿ ಹೆಣೆಯುವ ಕೈಗಳಿಗೆ.ಕಾರ್ಮಿಕರೆ ಈ ದೇಶದ ಸಂಪತ್ತು ಇವರಿಗೇ ಎಂದೂ ಬರದಿರಲಿ ಯಾವುದೇ ಆಪತ್ತು.

ಸರ್ವರಿಗೂ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು.

ಅಹಂಭಾವ ಅಳಿದು ದಾಸೋಹಂಭಾವ ಬೆಳೆಯಲಿಮಾನವನ ಪ್ರಗತಿಗೆ ಮೂಲ “ಕಾಯಕ” .ಪ್ರತಿಯೊಬ್ಬ ಮಾನವನು ಕಾಯಕ ಯೋಗಿಯಾಗಿ ಶುದ್ದ ಮನಸ್ಸಿನಿಂದ ತನ್ನ ಪಾಲಿನ ಕಾಯಕವನ್ನು ಕೈಗೊಳ್ಳಬೇಕು .ತನ್ನ ಕಾಯಕದಿಂದ ಬಂದ ಆದಾಯದಲ್ಲಿ ತನಗೆ ಬೇಕಾದಷ್ಷನ್ನು ಉಳಿಸಿಕೊಂಡು ಇನ್ನುಳಿದ ಆದಾಯವನ್ನು ಲೋಕಕಲ್ಯಾಣಕ್ಕಾಗಿ ದಾನ ಮಾಡಬೇಕು ಇದನ್ನೇ ದಾಸೋಹ ಎಂತಲೂ ಕರೆಯುತ್ತಾರೆ. ಕಾಯಕ ಮತ್ತು ದಾಸೋಹಗಳೆರಡು ಜಗದ ಎರಡು ಕಣ್ಣುಗಳು. ದಾಸೋಹವೆಂದರೆ ತನ್ನಲ್ಲಿ ಅಗತ್ಯಕಿಂತಲೂ ಹೆಚ್ಚಾದುದ್ದನ್ನು ಬಡವರಿಗೆ ದಾನ ಕೊಡುವುದು  ಆದರೆ ಕೊಟ್ಟದ್ದನ್ನು ಪ್ರಕಟ ಪಡಿಸದೇ ಗುಪ್ತವಾಗಿಡುವುದು. ದಾನ ಮಾಡಿದೆ ಎಂದು ಅಹಂ ಪಡುವುದಲ್ಲ. ತಾನು ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಹಾಗಾದಾಗ ಮಾತ್ರ ಅದು ದಾಸೋಹ ಆಗುತ್ತದೆ ಇಲ್ಲದಿದ್ದರೆ ಅದು ಬರಿ ಅಹಂ ಅಗುತ್ತದೆ.ದಾಸೋಹ ಮಾಡುವುದು ಒಂದು ಶ್ರೇಷ್ಠ ಕಾರ್ಯ ಹಾಗಾಗಿ ಸಮಾಜದ ಕಲ್ಯಾಣಕ್ಕೆ ದಾಸೋಹ ಮಾಡಿ ಎಂಬ ಸಾರ್ವತ್ರಿಕ ಮೌಲ್ಯ ನೀಡಿದವರು ಜಗದ ಅಣ್ಣ ಬಸವಣ್ಣ.

ಕಾಯಕ ಹಾಗು ದಾಸೋಹ ಈ ಪರಿಕಲ್ಪನೆಯನ್ನು ಹುಟ್ಟುಹಾಕಿ ಕಾಯಕವೇ ಕೈಲಾಸ ಎಂಬ ದಿವ್ಯ ಮಂತ್ರವನ್ನು ಜಗತ್ತಿಗೆ ಸಾರಿದ ಮಹಾ ಪುರುಷ ಬಸವಣ್ಣ. ಸಮಾನತೆಯ ಹರಿಕಾರನಾಗಿ, ಕಾಯಕ ಯೋಗಿಯಾಗಿ, ದಾಸೋಹದ ಜಂಗಮನಾಗಿ, ವಚನ ರಚನೆಕಾರನಾಗಿ, ಜಗದ ಬೆಳಕಾಗಿ ಬೆಳಗಿದ ಬಸವಣ್ಣ ೧೨ ನೇ ಶತಮಾನ ಕಂಡ ಯುಗಪುರುಷ. ಸಕಲ ಜೀವಿಗಳಿಗೆ ಲೇಸನೆ ಬಯಸಿದ ಸಾಮಾಜಿಕ ಕ್ರಾಂತಿಯ ಹರಿಕಾರ. ಬದುಕಿದ್ದು ೩೭ ವರ್ಷಳಾಗಿದ್ದರೂ  ಮೂರು ಜನ್ಮಕ್ಕಾಗುವಷ್ಟು ಪ್ರೀತಿಯನ್ನು ಜಗತ್ತಿಗೆ ಧಾರೆಯೆರೆದ ಧೀಮಂತ. ಮಾನವೀಯತೆಯ ಮಾಲೆಯನು ಜನರ ಹೃದಯಕೆ ಸುತ್ತಿ ಅಂತಃಕರಣವನ್ನೇ ಉಸಿರಾಗಿಸಿದ ಮಹಾಂತ. ಇಂತಹ ಮಹಾತ್ಮನ ಜನ್ಮ ದಿನವೇ ಈ ಬಸವ ಜಯಂತಿ ಇದನ್ನು ಅಕ್ಷಯ ತೃತೀಯವೆಂತಲೂ ಆಚರಿಸುತ್ತಾರೆ.

ತನುವ ಕೊಟ್ಟು ಗುರುವನೊಲಿಸಬೇಕು

ಮನವಕೊಟ್ಟು ಲಿಂಗವನೊಲಿಸಬೇಕು

ಧನವ ಕೊಟ್ಟು ಜಂಗಮವನೊಲಿಸಬೇಕು.

ಈ ವಚನವು ತ್ರಿವಿದ ದಾಸೋಹದ ಮಹತ್ವವನ್ನು ಸಾರುತ್ತದೆ. ಗುರುವಿನ ಸೇವೆಗೆ ತನುವನ್ನು-ಲಿಂಗಾರ್ಚನೆಗೆ ಮನವನ್ನು -ಜಂಗಮ ಸೇವೆಗೆ ಧನವನ್ನು ವಿನಿಯೋಗಿಸಬೇಕು  ಎಂದು ಶರಣರು ಹೇಳಿದ್ದಾರೆ. ಅಂದರೆ ನಾವು ಏನನ್ನಾದರೂ ದಾನ ನೀಡುತ್ತೇವೆ ಅಂದರೆ ಅದು ಸತ್ಪಾರ್ಥಕ್ಕೆ ಸಲ್ಲಬೇಕೇ ವಿನಃ ದುರುಪಯೋಗಕ್ಕೆ ಸಲ್ಲಬಾರದು.

ಹಸಿದವರಿಗೆ ಅನ್ನ ದಾಸೋಹ

ಅಜ್ಞಾನಕ್ಕೆ ಜ್ಞಾನ ದಾಸೋಹ

ದೈವಕ್ಕೆ ವಚನಗಳ ದಾಸೋಹ

ಶಿವಭಕ್ತರಿಗೆ ಭಕ್ತಿ ಸೇವಾ ದಾಸೋಹಗಳನ್ನು

ಅರುಹಿದ ಬಸವಣ್ಣ ನಿಮಗೆ ಕೋಟಿ ಕೋಟಿ ನಮನ

ಸರ್ವರಿಗೂ ಬಸವ ಜಯಂತಿಯ ಶುಬಾಶಯಗಳು

ನನ್ನ ಮತ ದಾನಕ್ಕಿದೆಯೇ ಹೊರತು; ಮಾರಾಟಕ್ಕಲ್ಲ.

ಪ್ರಜಾಪ್ರಭುತ್ವ ಮಾದರಿ ಸರ್ಕಾರದಲ್ಲಿ ಮತದಾನಕ್ಕೆ ಮಹತ್ವದ ಸ್ಥಾನವಿದೆ ಏಕೆಂದರೆ  ಮತದಾನ ಮಾಡುವ ಪ್ರಜೆಯೇ ಪ್ರಭುವಾಗಿ ಆಳುವ ಸರ್ಕಾರವನ್ನು ಚುನಾಯಿಸುತ್ತಾನೆ .ತನ್ನ ಪ್ರತಿನಿಧಿ ಯಾರಿರಬೇಕು ಹೇಗಿರಬೇಕು ಎಂಬುದನ್ನು ನಿರ್ಧರಿಸುತ್ತಾನೆ, ಅಂದರೆ ಪ್ರಜೆಗಳೆ ತಮ್ಮನ್ನಾಳುವ ಸರ್ಕಾರವನ್ನು ಆಯ್ಕೆಮಾಡಿಕೊಳ್ಳಲು ಸಂವಿಧಾನಾತ್ಮಕವಾಗಿ ಕೊಟ್ಟ ಪರಮೋಚ್ಛ ಅಧಿಕಾರವೇ “ಮತದಾನ ಇದು ಕೂಡ  ಬಸವ ಜಯಂತಿಯಷ್ಟೇ ಪವಿತ್ರವಾದುದು. ಮತದಾನ ಮಾಡುವುದು ಪವಿತ್ರ ಕರ್ತವ್ಯ ನಿಜ ಆದರೆ ಇಂದಿನ ರಾಜಕೀಯ ಪಕ್ಷಗಳ ಸಿದ್ಧಾಂತ ರಾಜಕೀಯ ನಾಯಕರ ಕೊಳುಕು ಮನಸ್ಥಿತಿ,ನೋಡಿದರೆ ಮತದಾನ ಮಾಡುವ ಮನಸ್ಸು ಬರುವುದಿಲ್ಲ. ಯಾವ ರಾಜಕೀಯ ನಾಯಕರೂ  ಲೋಕ ಕಲ್ಯಾಣದ ಕನಸನ್ನು ಕಂಡವರಲ್ಲ.ನಾನು ಯಾವ ಪಕ್ಷದಲ್ಲಿದ್ದರೆ ಅಧಿಕಾರದ ಗದ್ದಿಗೆಗೆ ಏರಬಹುದು, ಎನ್ನುವ ಲೆಕ್ಕಾಚಾರದಲ್ಲಿ ಕೆಲವು ನಾಯಕರಿದ್ದರೆ, ಇನ್ನು ಕೆಲವರು ಯಾರನ್ನು ತಮ್ಮ ಪಕ್ಷಕ್ಕೆ ಕರೆತಂದರೆ ಲಾಭವಾಗಬಹುದು, ಎದುರಾಳಿಗೆ ಎಷ್ಟು ನಷ್ಟವಾಗಬಹುದು, ಈ ಲೆಕ್ಕಾಚಾರದಲ್ಲಿ ನಾಯಕರು ಮುಳಿಗಿದ್ದರೆ, ಮತದಾನ ಮಾಡುವ ಮತದಾರ ಯಾವ ಅಭ್ಯರ್ಥಿ ಒಂದು ಓಟಿಗೆ ಎಷ್ಟು ನೋಟು ಕೊಡುಬಹುದು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾನೆ.  ಹೀಗಾದರೆ ಚುನಾವಣೆ ತನ್ನ ಪಾವಿತ್ಯ ಕಳೆದುಕೊಳ್ಳುತ್ತದೆ. ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಎಂಬ ಪ್ರಜಾಪ್ರಭುತ್ವದ ಸಿದ್ದಾಂತ ತಲೆಕೆಳಗಾಗಿ ಹಣದಿಂದ ಹಣಕ್ಕಾಗಿ ಹಣವೇ ಆಳುವ ಹಣಪ್ರಭುತ್ವ ತಲೆಎತ್ತೀತು! ಮಾನ್ಯ ಮತದಾರ ಬಂಧುಗಳೆ  ಮತದಾನ ಎನ್ನುವುದು ಶ್ರೇಷ್ಠ ದಾನ ಇದನ್ನು ಅಯೋಗ್ಯರಿಗೆ ದಾನ ಮಾಡುವುದಲ್ಲ. ನೋಟಿಗಾಗಿ ಓಟನ್ನು ಮಾರಿಕೊಳ್ಳುವುದಲ್ಲ. ಪವಿತ್ರವಾದ ನಮ್ಮ ಈ ಹಕ್ಕನ್ನು ಪವಿತ್ರರಾದವರಿಗೆ ದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ಉಳಿಸಬೇಕಾಗಿದೆ ಕೊಡಬೇಕು ಮಗಳ ಮತಿವಂತನಿಗೆ ಎಂಬ ನಾಣ್ಣುಡಿಯಂತೆ ಕೊಡಬೇಕು ಮತವ ಮತಿಯುಳ್ಳವಂಗೆ  ಅಯೋಗ್ಯನಿಗೆ ಅಪಾತ್ರರಿಗೆ ಮತದಾನ ಮಾಡಿದರೆ ಮರ್ಕಟನ ಕೈಗೆ ಮಾಣಿಕ್ಯ ಕೊಟ್ಟಂತಾದೀತು. ಮತದಾರ ಬಂಧುಗಳೆ ಮತದಾನ ಮಾಡುವ ಮುನ್ನ ಯೋಚಿಸಿ ಮತದಾನ ಮಾಡಿ. ಮತದಾನ ನಿಮ್ಮ ಹಕ್ಕು ಒಳ್ಳೆಯವನಿಗೆ ಮತ ಹಾಕುವುದು ನಿಮ್ಮ ಆಯ್ಕೆ .ನಿಮ್ಮ ಆಯ್ಕೆ ಉತ್ತಮವಾಗಿದ್ದರೆ ಪ್ರಜಾಪ್ರಭುತ್ವ ಗಟ್ಟಿಯಾಗುತ್ತದೆ.ಸಂವಿಧಾನಕ್ಕೊಂದು ಬೆಲೆ ಬರುತ್ತದೆ.ಮತ ದಾನಕ್ಕಿದೆಯೇ ಹೊರತು ಅದು ಮಾರಟಕ್ಕಿಲ್ಲ ಆದ್ದರಿಂದ ಈ ರಾಜಕೀಯ ಪಕ್ಷದವರು ಹಂಚುವ ಹಣ ವಸ್ತು ಒಡವೆ ಇವುಗಳಿಗೆ ಓಟನ್ನು ಮಾರಿಕೊಳ್ಳದೆ ಸಮರ್ಥ ಅಭ್ಯರ್ಥಿಗಳಿಗೆ ಮತದಾನ ಮಾಡಿದರೆ ಪ್ರಜಾಪ್ರಭುತ್ವದ ಆಶಯಕ್ಕೆ ಬೆಲೆ ಬರುತ್ತದೆ. ಮೇ ೭ ರಂದು ಜರುಗುವ ಸಾರ್ವತ್ರಿಕ ಚುನಾವಣೆಯಲ್ಲಿ ನಾವು ಸಚ್ಚಾರಿತ್ಯ ವ್ಯಕ್ತಿಗಳಿಗೆ ನಮ್ಮ ಮತವನ್ನ ಹಾಕುವ ಮೂಲಕ ಉತ್ತಮರನ್ನು ಬೆಂಬಲಿಸೋಣ.

ಕೊನೆ ಹನಿ-

ವೈಶಾಖ ಎಂದರೆ ಅದು ಶಾಖವೇ ಸೂರ್ಯ ಭೂಮಿಯ ಸಮೀಪಕ್ಕೆ ಬಂದು ತನ್ನ ಶಾಖದ ಪ್ರಖರತೆಯನ್ನು ಅರುಹಿದರೆ,ಮೇ ೧ ಕಾರ್ಮಿಕರ ಮಹತ್ವವನ್ನು ಅವರ ಕಾಯಕದ ಮಹತ್ವನ್ನು ಅರುಹುತ್ತದೆ ಹಾಗೇಯೇ ಬಸವಣ್ಣ ಜಗಕ್ಕೆ ಕಾಯಕ ದಾಸೋಹಗಳ ಮಹತ್ತವನ್ನು ಸಾರಿದ ಮಹಾಪುರುಷ  ಆತನ ಜನುಮ ದಿನವೇ ಇದೇ ತಿಂಗಳ ೧೦ ಬಸವ ಜಯಂತಿ.ಇನ್ನು ಮೇ ೭ ಇದು ಮತದಾನದ ಹಬ್ಬ. ಸಂವಿದಾನವು ಬಾರತೀಯ ನಾಗರೀಕರಿಗೆ ಕೊಟ್ಟ ಪರಮಾಧಿಕಾರ. ಒಂದು ಮತ ದೇಶದ ಗತಿಯನ್ನೇ ಬದಲಿಸುವ ಶಕ್ತಿಯಿದೆ. ಹಾಗಾಗಿ ಮತದಾನ ಪ್ರಜೆಗಳ ಕರ್ತವ್ಯ.ಹಬ್ಬಗಳನ್ನು ನಾವು ಹೇಗೆ ಸಡಗೆ ಸಂಭ್ರಮದಿಂದ ಎಲ್ಲರೂ ಸೇರಿ ಆಚರಿಸುತ್ತೇವೆಯೋ ಹಾಗೆಯೇ ಮತದಾನದ ಹಬ್ಬವನ್ನು ಸಂತೋಷದಿಂದ ಆಚರಿಸೋಣ ನನ್ನದೊಂದು ಮತದಿಂದ ಏನಾಗುತ್ತೆ ಎಂಬ ಅಸಡ್ಡೆಯಿಂದ ಮತದಾನ ಮಾಡದೆ ದೂರ ಉಳಿಯುವುದು ಬೇಡ. ನನ್ನ ಮತ ನನ್ನಹಕ್ಕು ಎಂದು ಭಾವಿಸಿ ಮೇ ೭ ರಂದು ಜರುಗುವ ಮತದಾನ ಹಬ್ಬದಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ. ಮತದಾನ ಒಂದು ಹಬ್ಬ ಬನ್ನಿ ಮತದಾನ ಮಾಡಿ ಸಂಭ್ರಮಿಸೋಣ.

ಉತ್ತಮರಿಗೆ ಮತದಾನ ಮಾಡಿ ಪ್ರಜಾಪ್ರಭುತ್ವ ಬೆಂಬಲಿಸೋಣ

ಎ.ಎಂ.ಪಿವೀರೇಶಸ್ವಾಮಿ

ಹೊಳಗುಂದಿ.

WhatsApp Group Join Now
Telegram Group Join Now
Share This Article
error: Content is protected !!