Ad image

ಮತದಾನವೆನ್ನುವುದು ನಮ್ಮ ಪ್ರಜ್ಞಾವಂತಿಕೆಯ ಸೂಚಕ; ರಾಹುಲ್ ಶರಣಪ್ಪ ಸಂಕನೂರ್ 

Vijayanagara Vani
ಮತದಾನವೆನ್ನುವುದು ನಮ್ಮ ಪ್ರಜ್ಞಾವಂತಿಕೆಯ ಸೂಚಕ; ರಾಹುಲ್ ಶರಣಪ್ಪ ಸಂಕನೂರ್ 

ಮತದಾನವೆನ್ನುವುದು ನಮ್ಮ ಪ್ರಜ್ಞಾವಂತಿಕೆಯ ಸೂಚಕವಾಗಿದ್ದು ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಬಲ ಶಕ್ತಿಯೂ ಹೌದು. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತಚಲಾವಣೆ ಮಾಡಬೇಕು ಎಂದು ಬಳ್ಳಾರಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಬಳ್ಳಾರಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ    ರಾಹುಲ್ ಶರಣಪ್ಪ ಸಂಕನೂರ್ ಅವರು ಅಭಿಪ್ರಾಯ ಪಟ್ಟರು

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಬಳ್ಳಾರಿ, ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ಸಂಡೂರು ಹಾಗೂ ಜೆ ಎಸ್ ಡಬ್ಲ್ಯೂ ಫೌಂಡೇಶನ್ ಇವರುಗಳ ಸಹಯೋಗದಲ್ಲಿ ವಿದ್ಯಾನಗರದ ಜೆಮ್ಯಾಕ್ಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ವಿದ್ಯಾನಗರ ಹಾಗೂ ದೋಣಿಮಲೈನಲ್ಲಿ ಅತಿ ಕಡಿಮೆ ಮತದಾನವಾಗಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಾವೆಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವ ಮೂಲಕ ಮತದಾನ ಪ್ರಮಾಣದಲ್ಲಿ ವಿದ್ಯಾನಗರಕ್ಕೆ ಅಂಟಿರುವ ಕಪ್ಪುಚುಕ್ಕೆಯನ್ನು ಅಳಿಸಬೇಕು ಎಂದು ಹೇಳಿದರು.  

 ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸಂಡೂರು ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಎಚ್ ಷಡಕ್ಷರಯ್ಯ ಅವರು ಪ್ರತಿಯೊಂದು ಮತವು ಕೂಡ ಅತ್ಯಮೂಲ್ಯ ಒಂದೊಂದು ಮತಕ್ಕೆ ದೇಶದ ಗತಿಯನ್ನೇ ಬದಲಾಯಿಸುವ ಶಕ್ತಿ ಇದೆ. ಸಂಡೂರು ತಾಲೂಕಿನಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿದ್ದು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುವಂತೆ  ಜಾಗೃತಿ ಮೂಡಿಸುತ್ತಿದ್ದು ವಿದ್ಯಾನಗರದಲ್ಲಿ ಮತದಾನ ಪ್ರಮಾಣ ಹೆಚ್ಚಳವಾಗುವಲ್ಲಿ ಜೆ ಎಸ್ ಡಬ್ಲ್ಯೂ ನೌಕರರರು ಹಾಗೂ ಕುಟುಂಬದ ಸದಸ್ಯರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಹಕರಿಸಬೇಕು ಎಂದು ತಿಳಿಸಿದರು

 ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಜೆ ಎಸ್ ಡಬ್ಲ್ಯೂ ಫೌಂಡೇಶನ್ ಸೀನಿಯರ್ ವೈಸ್ ಪ್ರೆಸಿಡೆಂಟ್ ( ಅಡ್ಮಿನ್ ) ಸುನಿಲ್ ರಾಲ್ಫ್ ಇವರು ಮಾತನಾಡಿ ನಮ್ಮ ಮತ ನಮ್ಮ ಹಕ್ಕು. ಆದ ಕಾರಣ ಯಾವುದೇ ನಿರ್ಲಕ್ಷ್ಯ ಮಾಡದೆ ನಮ್ಮ ಫೌಂಡೇಶನ್ನಿನ ಸಿಬ್ಬಂದಿಯವರು ಕುಟುಂಬದವರೊಂದಿಗೆ  ಮತದಾನ ಮಾಡುವ ಮೂಲಕ ಮತದಾನ ಪ್ರಮಾಣ ಹಿನ್ನಡೆಯಲ್ಲಿ ನಮಗೆ ಅಂಟಿರುವ ಕಪ್ಪು ಚುಕ್ಕೆಯನ್ನು ಅಳಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಬಳ್ಳಾರಿಯ ಚಿಗುರು ಕಲಾ ತಂಡದ ಹುಲುಗಪ್ಪ ಮತ್ತು ತಂಡದವರು ಜಾಗೃತಿ ನಾಟಕವನ್ನು ಹಾಗೂ ಜಾಗೃತಿ ಗೀತೆಗಳನ್ನು ಪ್ರಸ್ತುತಪಡಿಸಿದರು

 ಅತಿಥಿಗಳಾಗಿ ಸಂಡೂರಿನ ಲೋಕಸಭಾ ಚುನಾವಣೆ 2024 ಸಹಾಯಕ ಚುನಾವಣಾ ಅಧಿಕಾರಿ ಸತೀಶ್ , ತಹಶೀಲ್ದಾರ್ ಅನಿಲ್ ಕುಮಾರ್ ಭಾಗವಹಿಸಿದ್ದರು. ವಡ್ಡು ಗ್ರಾಮ ಪಂಚಾಯಿತಿ ಪಿಡಿಒ ರಂಗಸ್ವಾಮಿ, ಕಾರ್ಯದರ್ಶಿ ಜುಬೇರ್ ಅಹಮದ್, ತಾಲೂಕು ಪಂಚಾಯತಿ ಸಿಬ್ಬಂದಿ ವೆಂಕಪ್ಪ ಉಪಸ್ಥಿತರಿದ್ದರು. ಚಿಗುರು ಕಲಾತಂಡದ ಹುಲುಗಪ್ಪ ಪ್ರಾರ್ಥಿಸಿದರು. ಜೆ ಎಸ್ ಡಬ್ಲ್ಯೂ ಸಿಬ್ಬಂದಿ ಪದ್ಮನಾಭ ಸ್ವಾಗತಿಸಿದರು. ಶಿಕ್ಷಕ ಜಿ.ಎಮ್. ಪ್ರದೀಪ್ ಕುಮಾರ್ ಮತದಾರ ಪ್ರತಿಜ್ಞಾವಿಧಿ ಬೋಧಿಸಿ ಕಾರ್ಯಕ್ರಮ ನಿರ್ವಹಿಸಿದರು.  

ತಾಲೂಕು ಸ್ವೀಪ್ ಸಮಿತಿ ಸಂಡೂರು ವತಿಯಿಂದ ನಿರ್ಮಿಸಲಾಗಿದ್ದ ಮತದಾನ ಸೆಲ್ಫಿ ಬೂತ್ ನಲ್ಲಿ  ಜೆ ಎಸ್ ಡಬ್ಲ್ಯೂ ನೌಕರರು ಸಂಭ್ರಮದಿಂದ ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ವಿಶೇಷವಾಗಿತ್ತು.

 

 

Share This Article
error: Content is protected !!
";