ಗಾಳಿಯ ಗುಣಮಟ್ಟದಲ್ಲಿ ನಾವೇ ಉತ್ತಮರು..

Vijayanagara Vani
ಗಾಳಿಯ ಗುಣಮಟ್ಟದಲ್ಲಿ ನಾವೇ ಉತ್ತಮರು..

ನಾವು ಉಸಿರಾಡುವ ಗಾಳಿಯ ಗುಣಮಟ್ಟವನ್ನು ಎಕ್ಯಐ ವಾಲ್ಯೂ ಮಾನದಂಡದ ಮೂಲಕ ಅಳೆಯಲಾಗುತ್ತದೆ. ಎಕ್ಯುಐ ವಾಲ್ಯೂ 50ರ ಒಳಗಡೆ ಇದ್ದರೆ ಗಾಳಿಯ ಗುಣಮಟ್ಟ ಉತ್ತಮವೆಂದು, 51 ರಿಂದ 100ರ ಒಳಗೆ ಇದ್ದರೆ ತೃಪ್ತಿಕರ, 101 ರಿಂದ 200ರ ವರೆಗೆ ಸಾಧಾರಣ, 201 ರಿಂದ 300 ಇದ್ದಲ್ಲಿ ಕಳಪೆ, 401ಕ್ಕಿಂತ ಮೇಲ್ಪಟ್ಟ ಸೂಚ್ಯಂಕವಿದ್ದರೆ ಅತಿ ಕಳಪೆ ಎಂದು ನಿರ್ಧರಿಸಲಾಗುತ್ತದೆ.

ಗಾಳಿಯ ಗುಣಮಟ್ಟವನ್ನು ಅಳೆಯಲು ಮಾಪನ ಯಂತ್ರಗಳನ್ನು ನಮ್ಮ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಅಳವಡಿಸಲಾಗಿದೆ. ಈ ಮಾಪನಗಳ ಮೂಲಕ ಗಾಳಿಗುಣಮಟ್ಟವನ್ನು ಲೆಕ್ಕ ಹಾಕಲಾಗುತ್ತಿದ್ದು ರಾಜ್ಯದಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿಲ್ಲ ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ. ಇದು ನಮ್ಮೆಲ್ಲರ ಪಾಲಿಗೆ ಸಂತೋಷದ ಸುದ್ದಿಯಾದರೂ ಮುಂದಿನ ದಿನಗಳಲ್ಲೂ ವಾಯು ಸಂರಕ್ಷಣೆಯತ್ತ ನಾವೆಲ್ಲರೂ ಕೈಜೋಡಿಸಬೇಕಿದೆ.

ರಾಜ್ಯದ ಆಯಾ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಎಕ್ಯುಐ ಬದಲಾದಂತೆ ನಗರ, ಪಟ್ಟಣಗಳ ಸ್ಥಾನಗಳು ಬದಲಾಗುತ್ತವೆ. ಎರಡು ಮೂರು ನಗರಗಳಲ್ಲಿ ಸಾಧಾರಣ ಮಟ್ಟಕ್ಕೆ ತಲುಪಿದ್ದರೂ ಸ್ವಲ್ಪ ದಿನಗಳ ಬಳಿಕ ತೃಪ್ತಿಕರ ಮಟ್ಟಕ್ಕೆ ಬಂದಿವೆ. ವಿಶ್ವದ ವಾಯುಮಾಲಿನ್ಯ ಹೆಚ್ಚುವ 100 ನಗರಗಳ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ನಗರಗಳೂ ಸೇರದಿರುವುದು. ಎಲ್ಲರೂ ಖುಷಿ ಪಡುವ ವಿಷಯವಾಗಿದೆ.

 ಸೇಫ್‌ ರೋನ್‌ನಲ್ಲಿ ಬೆಂಗಳೂರು

ರಾಜ್ಯ ರಾಜಧಾನಿ ಬೆಂಗಳೂರಿನ ಗಾಳಿಯ ಗುಣಮಟ್ಟ ಉತ್ತಮವಾಗಿದೆ. ಮಾತ್ರವಲ್ಲ ಒಮ್ಮೆಯೂ ದೆಹಲಿಯಂತೆ ಕಳಪೆ ಮಟ್ಟಕ್ಕೆ ತಲುಪಿಲ್ಲ. ಸಿಲ್ಡ್‌ಬೋರ್ಡ್, ಮೈಸೂರು ರಸ್ತೆಯಕವಿಕಾ, ಕೆಂಗೇರಿ ಪರಿಸರದಲ್ಲಿ ಮಾತ್ರ ಕೆಲವೊಮ್ಮೆ ಗಾಳಿಯ ಗುಣಮಟ್ಟ ಸಾಧಾರಣ ಹಂತಕ್ಕೆ ತಲುಪಿದೆ.

ಎಕ್ಯುಐ ಗಡಿ ದಾಟಿದರೆ ಏನಾಗುತ್ತೆ?

ಒಂದು ವೇಳೆ ಗಾಳಿಯ ಗುಣಮಟ್ಟ ಸೂಚ್ಯಂಕ 400ರ ಗಡಿ ದಾಟಿದಲ್ಲಿ ಅಲ್ಲಿನ ಗಾಳಿಯಲ್ಲಿ ಅತಿ ಸೂಕ್ತ ಮಲಿನಕಾರಕಗಳಾದ ಪಿಎಂ 2.5 ಹೆಚ್ಚಿನ ಪ್ರಮಾಣದಲ್ಲಿದೆ ಎಂದು ಅರ್ಥ. ಈ ಮಲಿನಕಾರಕಗಳು ರಕ್ತದಲ್ಲಿ ಸೇರಿಕೊಂಡು ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಲಿವೆ. ವಿಷಕಾರಿ ಹೊಗೆ ದೇಹಕ್ಕೆ ಸೇರಿ ಅದರಿಂದ ವಯೋವೃದ್ಧರಿಗೆ, ಮಕ್ಕಳಿಗೆ ಶ್ವಾಸಕೋಶ ಸಮಸ್ಯೆ ಎದುರಾಗಲಿದೆ. ದೆಹಲಿಯಲ್ಲಿ ಈಗಾಗಲೇ ಎಕ್ಯುಐ 400 ಅನ್ನು ಮೀರಿದ್ದು ಅಲ್ಲಿ ಗಾಳಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಚಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಲ್ಲಿ ಮಂಜಿನ ವಾತಾವರಣ ಸೃಷ್ಟಿಯಾಗಿದೆ.

 ಎಕ್ಯುಐ ಏರದಂತೆ ನಾವೇನು ಮಾಡಬಹುದು?

ನೆಲ, ಜಲದಂತೆ ಗಾಳಿಯು ಅತ್ಯಮೂಲ್ಯ ವಸ್ತು. ಆದ್ದರಿಂದ ಮೊದಲಾಗಿ ವಾಯು ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಇನ್ನು ಹೆಚ್ಚಿನ ಮಟ್ಟದಲ್ಲಿ ಅರಿವನ್ನು ಮೂಡಿಸುವ ಕೆಲಸವಾಗಬೇಕು.

ಖಾಸಗಿ ವಾಹನ ಬಳಕೆ ಕಡಿಮೆ ಮಾಡಿ ಸಮೂಹ ಸಾರಿಗೆ ವಾಹನಗಳನ್ನು ಬಳಸುವಂತಾಗಬೇಕು. ಕೃಷಿ ಮತ್ತು ಇತರ ತ್ಯಾಜ್ಯಗಳನ್ನು ಸುಡುವುದನ್ನು ನಿಲ್ಲಿಸಬೇಕು. ಅಪಾಯಕಾರಿ ಕೈಗಾರಿಕೆಗಳು ಬಿಡುವ ಕೆಟ್ಟ ಹೊಗೆಯನ್ನು ತಡೆಗಟ್ಟಬೇಕು. ಕಾಡು ಬೆಳೆಸುವ ಕೆಲಸಗಳಾಗಬೇಕಿದೆ. ಉಸಿರಾಟಕ್ಕೆ ಬೇಕಾದ ಗಾಳಿಯನ್ನು ಶುದ್ಧವಾಗಿ ಉಳಿಸುವ ಪ್ರಯತ್ನಗಳತ್ತ ಒಲವು ತೋರಬೇಕಿದೆ.

ಶುದ್ಧಗಾಳಿ ಎಂಬ ಅಮೂಲ್ಯ ಸಂಪತ್ತನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣವೇ!

WhatsApp Group Join Now
Telegram Group Join Now
Share This Article
error: Content is protected !!