ಒಂದೊಂದು ಜಿಲ್ಲೆಗಳು ಒಂದೊಂದು ವಿಶೇಷತೆಯನ್ನು ಒಳಗೊಂಡಿವೆ. ಅದೇ ರೀತಿ ದಾವಣಗೆರೆ ಅಂದರೆ ಮೊದಲು ನೆನಪಾಗೋದೆ ಬೆಣ್ಣೆದೋಸೆ. ಇಲ್ಲಿನ ದೋಸೆ ರಾಜ್ಯ ಅಲ್ಲದೆ, ಇಡೀ ದೇಶಾದ್ಯಂತ ಪ್ರಸಿದ್ಧಿಯಾಗಿದೆ. ಅಲ್ಲದೆ, ಹೊರಗಿನಿಂದ ಯಾರೇ ಈ ಜಿಲ್ಲೆಗೆ ಎಂಟ್ರಿ ಕೊಟ್ಟರೂ, ಇಲ್ಲಿನ ಬೆಣ್ಣೆದೋಸೆ ಸವಿಯದೇ ವಾಪಾಸ್ ಆಗುವುದಿಲ್ಲ. ಅಷ್ಟರ ಮಟ್ಟಿಗೆ ಪ್ರಖಾತಿಯಾಗಿದ್ದರೂ, GI ಟ್ಯಾಗ್ ನಿಡಲು ಕೇಂದ್ರ ನಿರಾಕರಿಸಿದೆ.
ದೇಶಾದ್ಯಂತ ಪ್ರಸಿದ್ಧಿ ಪಡೆದಿರುವ ದಾವಣಗೆರೆ ಬೆಣ್ಣೆ ದೋಸೆಗೆ ಕೇಂದ್ರ ಸರ್ಕಾರ ಜಿಐ ಟ್ಯಾಗ್ ನೀಡಲು ನಿರಾಕರಿಸಿದ್ದೇಕೆ? ಹೀಗಂದರೇನು? ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ಜನಪ್ರಿಯ ದೋಸೆಗಳ ಪೈಕಿ ದಾವಣಗೆರೆ ಬೆಣ್ಣೆ ದೋಸೆ ಕೂಡ ತುಂಬಾ ಪ್ರಸಿದ್ಧಿ ಪಡೆಸಿದೆ. ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಈ ಬೆಣ್ಣೆ ದೋಸೆಗೆ ಇದೀಗ ಭೌಗೋಳಿಕ ಸೂಚಕ ಟ್ಯಾಗ್ ನೀಡಲು ನಿರಾಕರಿಸಿರುವುದೇ ಅಸಮಾಧನದ ಸಂಗತಿಯಾಗಿದೆ.
ದಾವಣಗೆರೆಯ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸದನದಲ್ಲಿ ಕೋರಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿತಿನ್ ಪ್ರಸಾದ್, ದಾವಣಗೆರೆ ಬೆಣ್ಣೆದೋಸೆ ಹೆಚ್ಚು ಜನಪ್ರಿಯ ಆಗಿದೆ. ಆದರೆ, ಕರ್ನಾಟಕ, ದಾವಣಗೆರೆ ಹೊರಗಿನ ಪ್ರದೇಶಗಳನ್ನು ಒಳಗೊಂಡಂತೆ ಇತರೆ ಪ್ರದೇಶದಲ್ಲೂ ವ್ಯಾಪಕವಾಗಿ ಸಿಗುವ ಈ ದೋಸೆ ಸಾಮಾನ್ಯ ವಸ್ತುವಾಗಿದೆ ಎಂದು ಅಸಡ್ಡೆ ಉತ್ತರವನ್ನು ನೀಡಿದ್ದಾರೆ.
ದಾವಣಗೆರೆ ಬೆಣ್ಣೆ ದೋಸೆಯ ಹಿಂದಿರೋದು ಚೆನ್ನಮ್ಮ ಎಂಬ ಮಹಿಳೆ. ಬೆಳಗಾವಿಯ ರಾಮದುರ್ಗ ತಾಲೂಕಿನಿಂದ ಕುಟುಂಬವೊಂದು ದಾವಣಗೆರೆಗೆ ವಲಸೆ ಬಂದಿತ್ತು. ಈ ಕುಟುಂಬದ ಚೆನ್ನಮ್ಮ ಎಂಬ ಮಹಿಳೆ ತನ್ನ ಮಕ್ಕಳ ಜೊತೆ ದೋಸೆ, ಚಟ್ನಿ, ಆಲೂಗಡ್ಡೆ ಪಲ್ಯ ತಯಾರಿ ಮಾರಾಟ ಮಾಡಲು ಆರಂಭಿಸಿದರು. ದಾವಣಗೆರೆಯ ವಸಂತ ಟಾಕೀಸ್ ಬಳಿಯ ಸಾವಳಗಿ ನಾಟಕ ಥಿಯೇಟರ್ ಮುಂದೆ ಚೆನ್ನಮ್ಮ ಅವರ ಪುಟ್ಟ ಉಪಾಹಾರ ಗೃಹದಲ್ಲಿ ದೋಸೆ ಮಾಡುತ್ತಿದ್ದರು. ಮೊದಲು ಚೆನ್ನಮ್ಮ ರಾಗಿ ಹಿಟ್ಟಿನ ದೋಸೆ ಮಾಡುತ್ತಿದ್ದರು. 1938ರ ವೇಳಗೆ ಚೆನ್ನಮ್ಮ ಅವರ ಮಕ್ಕಳಾದ ಶಾಂತಪ್ಪ ಮತ್ತು ಮಹದೇವಪ್ಪ ಅವರು ಅಕ್ಕಿ ಹಿಟ್ಟಿನ ದೋಸೆ ಮಾಡಲು ಆರಂಭಿಸಿದರು. ಬೆಣ್ಣೆ ಬೆರೆಸಿದ ಬಿಸಿ ಬಿಸಿ ದೋಸೆಗೆ ದಾಲ್ ಕೊಡಲಾಗುತ್ತಿತ್ತು. ಮುಂದೆ ಇದೇ ಬೆಣ್ಣೆ ದೋಸೆ ಪ್ರಸಿದ್ಧಿಯಾಯಿತು. ದಿನ ಕಳೆದಂತೆ ಶಾಂತಪ್ಪ ಅವರು 1944ರಲ್ಲಿ ಶಾಂತಪ್ಪ ದೋಸೆ ಹೋಟೆಲ್ ಎಂಬ ತಮ್ಮದೇ ಆದ ಉಪಾಹಾರ ಗೃಹವನ್ನು ತೆರೆದರು. ಇದೇ ದಾವಣಗೆರೆಯ ಅತ್ಯಂತ ಹಳೆಯ ಬೆಣ್ಣೆ ದೋಸೆ ಹೋಟೆಲ್ ಆಗಿದೆ. ಒಟ್ಟಿನಲ್ಲಿ ಇದೀಗ ದಾವಣಗೆರೆ ಬೆಣ್ಣೆ ದೋಸೆಗೂ ಜಿಐ ಟ್ಯಾಗ್ ನೀಡದಿರುವುದು ಅಸಮಾಧಾನಕರ ಸಂಗತಿಯಾಗಿದೆ