ಬಳ್ಳಾರಿ,ಸೆ.04
ಜಿಲ್ಲೆಯ 25 ಪರೀಕ್ಷಾ ಕೇಂದ್ರಗಳಲ್ಲಿ ಸೆಪ್ಟೆಂಬರ್ 06 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪೊಲೀಸ್ ಕಾನ್ಸ್ ಟೇಬಲ್ (ಆರ್‌ಪಿಸಿ) ಮಿಕ್ಕುಳಿದ ವೃಂದ ಹುದ್ದೆಗಳಿಗೆ ಹಾಗೂ ಮಧ್ಯಾಹ್ನ 03 ರಿಂದ ಸಂಜೆ 04.30 ಗಂಟೆಯವರೆಗೆ ಪೊಲೀಸ್ ಕಾನ್ಸ್ ಟೇಬಲ್ ಸ್ಥಳೀಯ ವೃಂದದ ಹುದ್ದೆಗಳಿಗೆ ನೇರ ನೇಮಕಾತಿ ಲಿಖಿತ ಪರೀಕ್ಷೆ ನಡೆಯಲಿದ್ದು, ಪರೀಕ್ಷೆಯನ್ನು ಸುಗಮವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಪರೀಕ್ಷಾ ಕೇಂದ್ರದ ಸುತ್ತ-ಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶ ಎಂದು ಘೋಷಿಸಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಆದೇಶಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ರ ಕಲಂ 163 ರ ಅಡಿಯಲ್ಲಿ ತಮಗಿರುವ ಅಧಿಕಾರವನ್ನು ಚಲಾಯಿಸಿ ಈ ಆದೇಶವನ್ನು ಹೊರಡಿಸಿದ್ದಾರೆ.
ಪರೀಕ್ಷಾ ಕೇಂದ್ರದ ಸುತ್ತಮುತ್ತ ಅನಧಿಕೃತ ವ್ಯಕ್ತಿಗಳು ಹಾಗೂ ವ್ಯಕ್ತಿಗಳ ಗುಂಪುಗಳು ಜಮಾಯಿಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿರುವ ಎಲ್ಲಾ ಜೆರಾಕ್ಸ್ ಅಂಗಡಿಗಳು ಹಾಗೂ ಇಂಟರ್ನೆಟ್ ಸೆಂಟರ್‌ಗಳು ಕಾರ್ಯನಿರ್ವಹಿಸದಂತೆ ಕಟ್ಟುನಿಟ್ಟಿನ ಪ್ರತಿಬಂಧಕ ಆದೇಶ ಜಾರಿಗೊಳಿಸಲಾಗಿದೆ.
ಈ ಕಟ್ಟುನಿಟ್ಟಿನ ನಿಯಮಗಳು ಪರೀಕ್ಷೆಯ ಮೇಲ್ವಿಚಾರಣೆ ಹಾಗೂ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಅನ್ವಯಿಸುವುದಿಲ್ಲ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.