ಸಿರುಗುಪ್ಪ: ಸರ್ಕಾರ ಸಾರ್ವಜನಿಕರಿಗೆ ಉಚಿತವಾಗಿ ನೀಡುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಣೆ ಮಾಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಸಿರಿಗೇರಿ ಪಿ ಎಸ್ ಐ ಶಶಿಧರ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಮನೆಯಲ್ಲಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಹೆಚ್. ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 3ನೇ ವಾರ್ಡ್ ನಿವಾಸಿ ಯರಂಗಳಿ ಹನುಮಂತ ಎಂಬವವರ ಮನೆಯಲ್ಲಿ 30 ಚೀಲದಲ್ಲಿರುವ 900 ಕೆಜಿ ತೂಕದ ಸುಮಾರು 20,700 ಮೌಲ್ಯದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು ಮನೆ ಮಾಲಿಕ ಯರಂಗಳಿ ಹನುಮಂತನ ವಿರುದ್ಧ ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,
ಮನೆ ಮಾಲೀಕ ಪರಾರಿಯಾಗಿದ್ದಾನೆಂದು ಪೋಲಿಸರು ತಿಳಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ 30 ಚೀಲ ಪಡಿತರ ಅಕ್ಕಿಯನ್ನು ಯರಂಗಳಿ ಹನುಮಂತ ಎಂಬಾತನ ಮನೆಯಲ್ಲಿ ಸಂಗ್ರಹಿಸಿರುವುದು ಕಂಡುಬಂದಿದ್ದು, ಪೊಲೀಸರು ಮತ್ತು ನಾವು ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದೇವೆ ಎಂದು ಆಹಾರ ಇಲಾಖೆಯ ಅಧಿಕಾರಿ ಮಹಾರುದ್ರ ಗೌಡ ತಿಳಿಸಿದ್ದಾರೆ.
