ಮನೆ ಬಾಗಿಲಿಗೆ ನಮ್ಮ ಸರ್ಕಾರ: ಗುಡೇಕೋಟೆ ಹೋಬಳಿಯಲ್ಲಿ ಇಂದು ಪ್ರಜಾ ಆಂದೋಲನ ವಿಶೇಷ ಕಾರ್ಯಕ್ರಮ
ಕೂಡ್ಲಿಗಿ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಉದ್ದೇಶದಿಂದ “ಮನೆ ಮನೆಗೆ ನಮ್ಮ ಶಾಸಕರು, ಮನೆ ಬಾಗಿಲಿಗೆ ನಮ್ಮ ಸರ್ಕಾರ” ಕಾರ್ಯಕ್ರಮವನ್ನು ಸೆ.12ರಂದು ಗುಡೇಕೋಟೆ ಹೋಬಳಿ ಕ್ಷೇತ್ರದಲ್ಲಿ ಆಯೋಜಿಸಲಾಗಿದೆ.
ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಅವರ ನೇತೃತ್ವದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಗ್ರಾಮೀಣ ಭಾಗದ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಸಾಧ್ಯವಾದಷ್ಟು ಪರಿಹಾರ ಕಲ್ಪಿಸುವುದು ಹಾಗೂ ಸರ್ಕಾರದ ಜನಪರ ಯೋಜನೆಗಳ ಕುರಿತು ಮಾಹಿತಿ ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಸಮಸ್ಯೆಗಳು, ಮನವಿಗಳು ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕರು ಹಾಗೂ ಅಧಿಕಾರಿಗಳು ಮನವಿ ಮಾಡಿದ್ದಾರೆ.
ದಿನಾಂಕ: 12-09-2026, ಶನಿವಾರ
ಸಮಯ: ಬೆಳಗ್ಗೆ 10 ಗಂಟೆಯಿಂದ
ಸ್ಥಳ: ಕೆ.ಪಿ.ಎಸ್. ಶಾಲಾ ಆವರಣ, ಗುಡೇಕೋಟೆ
“ಸರ್ಕಾರ ನಿಮ್ಮ ಮನೆ ಬಾಗಿಲಿಗೆ – ನಿಮ್ಮ ಸಮಸ್ಯೆಗಳಿಗೆ ಪರಿಹಾರ” ಎಂಬ ಆಶಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಹೋಬಳಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿದೆ.