ಬಳ್ಳಾರಿ,ಸೆ.06
ಶಿಕ್ಷಣದ ಖಾಸಗೀಕರಣದಿಂದ ದೇಶದ ಶಿಕ್ಷಣ ವ್ಯವಸ್ಥೆಗೆ ತೊಂದರೆಯಾಗಿದೆ. ಸರ್ಕಾರಗಳು ಬದಲಾದಂತೆ ಶಿಕ್ಷಣ ವ್ಯವಸ್ಥೆಗಳು ಬದಲಾಗುತ್ತವೆ ಎಂದು ಸಾಹಿತಿ ಮತ್ತು ವಿಶ್ರೀಕೃವಿವಿಯ ಸಿಂಡಿಕೇಟ್ ಸದಸ್ಯರಾದ ಡಾ ಅಮರೇಶ ನುಗಡೋಣಿ ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶಿಕ್ಷಣ ನೀತಿಗಳ ಪರಿಪಾಲನೆಯಲ್ಲಿ ಸರ್ಕಾರಿ ಹಾಗೂ ಸರ್ಕಾರೇತರ ವಿದ್ಯಾಸಂಸ್ಥೆಗಳಲ್ಲಿ ಅತೀವ ವ್ಯತ್ಯಾಸಗಳಿವೆ. ದೇಶದ ಮತ್ತು ರಾಜ್ಯದ ಪ್ರಭುತ್ವಗಳು ಶಿಕ್ಷಣದ ಖಾಸಗೀಕರಣದಿಂದ ಇಬ್ಬಗೆಯ ಹಾದಿ ಹಿಡಿದಿವೆ ಎಂದರು. ಸರ್ಕಾರಗಳು ಶಿಕ್ಷಕರ, ವಿದ್ಯಾರ್ಥಿಗಳ, ಪೋಷಕರ ಹಾಗೂ ಸಮುದಾಯಗಳ ಸಾಮಾಜಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಆಯಾ ಶಿಕ್ಷಣ ನೀತಿಗಳನ್ನು ರೂಪಿಸಲು ಮುಂದಾಗಬೇಕು ಆಗ ಮಾತ್ರ ಮಕ್ಕಳು ಸೃಜನಶೀಲ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನಮ್ಮ ದೇಶವು ಅನಾದಿ ಕಾಲದಿಂದಲೂ ದ್ವಿಭಾಷಾ ಸಂಸ್ಕೃತಿಯೊAದಿಗೆ ಸಾಗುತ್ತಿದೆ. ಇದಕ್ಕೆ ಪೂರಕವಾಗಿ ಇಂದಿನ ಶಿಕ್ಷಕರು ಸಹ ಏಕ ವಿಷಯ ತಜ್ಞರಾಗದೆ ಬಹುಶಿಸ್ತೀಯ ಅಧ್ಯಯನದೆಡೆಗೆ ಚಿಂತನಶೀಲರಾಗಿ ಸಾಗಬೇಕು ಎಂದು ಹೇಳಿದರು. ಯುನೆಸ್ಕೊ ತಂಡವು ಪ್ರತಿ 5 ವರ್ಷಗಳಿಗೊಮ್ಮೆ ದೇಶದ ಶಿಕ್ಷಣ ನೀತಿಗಳ ಪರಾಮರ್ಶೆ ನಡೆಸಿ ನ್ಯೂನ್ಯತೆಗಳ ಕುರಿತು ವರದಿ ನೀಡುತ್ತವೆ. ಆದರೆ ಈ ವರದಿಗಳ ಅಳವಡಿಕೆ ಮರೀಚಿಕೆಯಾಗಿಯೆ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ ಎನ್ ಎಂ ಸಾಲಿ ಅವರು ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿನ ಅನೇಕ ಲೋಪದೋಷಗಳಿಗೆ ವಿದ್ಯಾರ್ಥಿ, ಶಿಕ್ಷಕ ಅಥವಾ ವ್ಯವಸ್ಥೆ ಯಾರು ಕಾರಣೀಭೂತರು ಎಂಬುದರ ಅಧ್ಯಯನ ನಡೆಯಬೇಕಿದೆ. ತಪ್ಪು ಮಾಡಿದ ವಿದ್ಯಾರ್ಥಿಗಳಿಗೆ ಶಿಕ್ಷೆ ವಿಧಿಸುವ ಅಧಿಕಾರ ಇಂದು ಶಿಕ್ಷಕರಿಗೆ ಇಲ್ಲದಂತಾಗಿದೆ. ಅವಿಭಜಿತ ಕುಟುಂಬಗಳು ಸಮಾಜದಲ್ಲಿ ಕ್ಷೀಣಿಸಿರುವುದರಿಂದ ಮಕ್ಕಳಿಗೆ ಬಾಲ್ಯದಲ್ಲಿ ದೊರಕಬೇಕಾದ ನೀತಿ ಪಾಠಗಳಿಂದ ವಂಚಿತರಾಗುತ್ತಿದ್ದಾರೆ ಎಂದರು. ಶಿಕ್ಷಕರು ಬೋಧನೆಯ ಜೊತೆಗೆ ವಿದ್ಯಾರ್ಥಿಗಳಿಗೆ ವಿವೇಕ ಹಾಗೂ ಅರಿವು ಮೂಡಿಸುವ ಕಾರ್ಯವನ್ನು ಮಾಡುವುದು ಇಂದಿನ ಅನಿವಾರ್ಯತೆ ಎಂದು ಹೇಳಿದರು.
ವಿವಿಯ ಕುಲಪತಿಗಳಾದ ಪ್ರೊ ಎಂ ಮುನಿರಾಜುರವರು ಮಾತನಾಡಿ, ಶಿಕ್ಷಕರಿಗೆ ಶಿಸ್ತು, ಸಂಯಮ ಹಾಗೂ ದಕ್ಷತೆ ಬಹುಮುಖ್ಯ. ಪ್ರತಿ ಶಿಕ್ಷಕರು ದೇಶದ ಜವಾಬ್ದಾರಿಯುತ ಪ್ರಜೆಗಳನ್ನು ನಿರ್ಮಾಣ ಮಾಡುವ ಹೊರೆ ಹೊತ್ತಿರುತ್ತಾರೆ. ನಾವೆಲ್ಲ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಿ ದೇಶ ಕಟ್ಟುವ ಕೆಲಸ ಮಾಡೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದ ಪೂರ್ವದಲ್ಲಿ ಡಾ ಸರ್ವೆಪಲ್ಲಿ ರಾಧಾಕೃಷ್ಣನ್‌ರವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ಇತ್ತೀಚೆಗೆ ವಿವಿಯಲ್ಲಿ ಜರುಗಿದ್ದ ವಿವಿಧ ಸ್ಫರ್ಧೆಗಳ ವಿಜೇತ ಶಿಕ್ಷಕರಿಗೆ ಮೆಡಲ್, ಟ್ರೋಫಿ ವಿತರಿಸಲಾಯಿತು.
ವಿವಿಯ ಕುಲಸಚಿವರಾದ ಪ್ರೊ ವಿ ಲೋಕೇಶ್, ಕಾರ್ಯಕ್ರಮದ ಸಂಯೋಜಕರಾದ ಡಾ ಸಾಹೇಬ್ ಅಲಿ ನಿರಗುಡಿ ವೇದಿಕೆಯಲ್ಲಿದ್ದರು.
ಎಲ್ಲ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಸಂಯೋಜಕರುಗಳು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.