ಯಾದಗಿರಿ: ಕರ್ನಾಟಕ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ನೀಡುವ ಅಗತ್ಯವಿದೆ ಎಂದು ಮಾಜಿ ಸಚಿವ ಕೆ. ಶಿವನಗೌಡ ನಾಯಕ ಒತ್ತಾಯಿಸಿದ್ದಾರೆ.
ಮಹಿಳೆಯರ ಆರ್ಥಿಕ ಹಾಗೂ ಸಾಮಾಜಿಕ ಸಬಲೀಕರಣಕ್ಕಾಗಿ ಸರ್ಕಾರ ಗೃಹಲಕ್ಷ್ಮೀ, ಉಚಿತ ಸಾರಿಗೆ ಸೇರಿದಂತೆ ಹಲವು ಯೋಜನೆಗಳನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹ. ಆದರೆ ಮಹಿಳಾ ಸಬಲೀಕರಣವು ಕೇವಲ ಯೋಜನೆಗಳ ಫಲಾನುಭವಿಗಳನ್ನಾಗಿ ಮಾಡುವುದಕ್ಕೆ ಸೀಮಿತವಾಗಬಾರದು. ನೀತಿ ರೂಪಿಸುವ ಹಾಗೂ ಆಡಳಿತದ ಪ್ರಮುಖ ನಿರ್ಧಾರ ಕೈಗೊಳ್ಳುವ ಹಂತದಲ್ಲಿಯೂ ಮಹಿಳೆಯರಿಗೆ ಸಮಾನ ಅವಕಾಶ ದೊರೆಯಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನಾ ಅಧಿನಿಯಮದ ಕುರಿತು ಚರ್ಚೆ ನಡೆಯುತ್ತಿದೆ. ಸ್ಥಳೀಯ ಸಂಸ್ಥೆಗಳ ಮೀಸಲಾತಿಯಿಂದಾಗಿ ಲಕ್ಷಾಂತರ ಮಹಿಳೆಯರು ಸಾರ್ವಜನಿಕ ಜೀವನಕ್ಕೆ ಬಂದಿದ್ದು, ಗ್ರಾಮ ಪಂಚಾಯಿತಿಯಿಂದ ರಾಜ್ಯ ಆಡಳಿತದವರೆಗೆ ಮಹಿಳೆಯರಿಗೆ ಹೆಚ್ಚಿನ ಅವಕಾಶ ನೀಡುವ ಮೂಲಕ ರಾಜಕೀಯ ಪ್ರಾತಿನಿಧ್ಯವನ್ನು ಮತ್ತಷ್ಟು ಹೆಚ್ಚಿಸಬೇಕು ಎಂದಿದ್ದಾರೆ.
ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಸಂದರ್ಭದಲ್ಲಿ ಜಾತಿ, ಪ್ರದೇಶ, ಅನುಭವ ಹಾಗೂ ಸಂಘಟನಾ ಸಾಮರ್ಥ್ಯದ ಜೊತೆಗೆ ಲಿಂಗ ಸಮತೋಲನಕ್ಕೂ ಆದ್ಯತೆ ನೀಡಬೇಕು. ಉಳಿದ ಸಚಿವ ಸ್ಥಾನಗಳಲ್ಲಾದರೂ ಅರ್ಹ ಮಹಿಳಾ ಶಾಸಕರಿಗೆ ಅವಕಾಶ ಕಲ್ಪಿಸುವ ಮೂಲಕ ಸರ್ಕಾರ ತನ್ನ ಮಹಿಳಾ ಸಬಲೀಕರಣದ ಬದ್ಧತೆಯನ್ನು ಕಾರ್ಯರೂಪದಲ್ಲಿ ತೋರಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಹಿಳೆಯರಿಗೆ ಹಣಕಾಸಿನ ನೆರವು, ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಸುರಕ್ಷತೆ ಎಷ್ಟು ಅಗತ್ಯವೋ, ರಾಜಕೀಯ ಅಧಿಕಾರವೂ ಅಷ್ಟೇ ಅಗತ್ಯ. ಮಹಿಳೆಯರನ್ನು ಕೇವಲ ಮತದಾರರು ಅಥವಾ ಯೋಜನೆಗಳ ಫಲಾನುಭವಿಗಳಾಗಿ ನೋಡುವ ಬದಲು ನೀತಿ ನಿರ್ಧಾರಕರನ್ನಾಗಿ ಬೆಳೆಸಿದಾಗ ಮಾತ್ರ ನಿಜವಾದ ಸಬಲೀಕರಣ ಸಾಧ್ಯ. “ಮಹಿಳೆಯರಿಗೆ ಅವಕಾಶ ನೀಡುವುದು ದಯೆಯಲ್ಲ; ಅದು ಅವರ ಹಕ್ಕು ಮತ್ತು ಪ್ರಜಾಪ್ರಭುತ್ವದ ಬಲ. ಕರ್ನಾಟಕವು ಮಹಿಳಾ ರಾಜಕೀಯ ಸಬಲೀಕರಣದಲ್ಲೂ ಮಾದರಿ ರಾಜ್ಯವಾಗಬೇಕು” ಎಂದು ಕೆ. ಶಿವನಗೌಡ ನಾಯಕ ತಿಳಿಸಿದ್ದಾರೆ.
