ಕೊಪ್ಪಳ ಜೂನ್ 27: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2026-27ನೇ ಸಾಲಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
2026-27ನೇ ಸಾಲಿನಲ್ಲಿ ಜಿಲ್ಲೆಯಾದ್ಯಂತ ಚಿಗುರು, ಯುವ ಸೌರಭ ಹಾಗೂ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಅದರಂತೆ ವಿವಿಧ ವಿಭಾಗಗಳ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ. ಚಿಗುರು ಕಾರ್ಯಕ್ರಮಕ್ಕೆ 8 ರಿಂದ 14 ವರ್ಷದೊಳಗಿನ ಪ್ರತಿಭಾವಂತ ಮಕ್ಕಳಿಂದ ಅರ್ಜಿ ಸಲ್ಲಿಸಬಹುದು. ಯುವ ಸೌರಭ ಕಾರ್ಯಕ್ರಮಕ್ಕೆ 15 ರಿಂದ 30 ವರ್ಷದೊಳಗಿನ ಯುವ ಕಲಾವಿದರು ಅರ್ಜಿ ಸಲ್ಲಿಸಬಹುದು. ಹಾಗೆಯೇ ಸಾಂಸ್ಕೃತಿಕ ಸೌರಭ ಕಾರ್ಯಕ್ರಮಕ್ಕೆ ಆಕಾಶವಾಣಿ ಬಿ, ಬಿ ಹೈ ಮತ್ತು ಎ ಗ್ರೇಡ್ ಕಲಾವಿದರು ಹಾಗೂ ಸರ್ಕಾರದಿಂದ ಪ್ರಶಸ್ತಿ ಪುರಸ್ಕೃತ ಕಲಾವಿದರು ಅರ್ಜಿ ಸಲ್ಲಿಸಬಹುದು.
ಆಸಕ್ತ ಕಲಾವಿದರು ತಮ್ಮ ಅರ್ಜಿಗಳನ್ನು ಅಗತ್ಯ ವಯೋಮಾನದ ದಾಖಲೆಗಳು ಹಾಗೂ ತಮ್ಮ ಕಾರ್ಯಕ್ರಮಗಳ ವಿವರಗಳೊಂದಿಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇಲ್ಲಿಗೆ ಖುದ್ದಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನಾಂಕವಾಗಿದ್ದು, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳುವಂತೆ ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
