ಬಳ್ಳಾರಿ, ಆ.1: ರಾಘವ ಮೆಮೋರಿಯಲ್ ಅಸೋಸಿಯೇಷನ್, ಬಳ್ಳಾರಿ ವತಿಯಿಂದ ನಾಟ್ಯ ಕಲಾ ಪ್ರಪೂರ್ಣ ಬಳ್ಳಾರಿ ರಾಘವರ 146ನೇ ಜಯಂತಿಯ ಅಂಗವಾಗಿ ಕನ್ನಡ ಹಾಗೂ ತೆಲುಗು ರಾಜ್ಯ ರಾಘವ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ನಾಟಕೋತ್ಸವವನ್ನು ಆಗಸ್ಟ್ 2 ಮತ್ತು 3ರಂದು ನಗರದ ರಾಘವ ಕಲಾ ಮಂದಿರದಲ್ಲಿ ಆಯೋಜಿಸಲಾಗಿದೆ.
78 ವರ್ಷಗಳ ಇತಿಹಾಸ ಹೊಂದಿರುವ ರಾಘವ ಮೆಮೋರಿಯಲ್ ಅಸೋಸಿಯೇಷನ್, ಬಳ್ಳಾರಿ ರಾಘವರ ರಂಗಭೂಮಿ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಕಳೆದ 2009ರಿಂದ ಪ್ರತಿವರ್ಷ ಕನ್ನಡ ಮತ್ತು ತೆಲುಗು ಭಾಷೆಯ ತಲಾ ಒಬ್ಬ ರಂಗಭೂಮಿ ಕಲಾವಿದರಿಗೆ 'ಬಳ್ಳಾರಿ ರಾಘವ ರಾಜ್ಯ ಪ್ರಶಸ್ತಿ' ಪ್ರದಾನ ಮಾಡುತ್ತ ಬಂದಿದೆ. ಪ್ರಶಸ್ತಿಯು ₹21,100 ನಗದು, ಬಳ್ಳಾರಿ ರಾಘವರ ಬೆಳ್ಳಿ ಪದಕ ಹಾಗೂ ಸ್ಮರಣಿಕೆ ಒಳಗೊಂಡಿದೆ.
ಬಳ್ಳಾರಿ ರಾಘವರು ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್ ಹಾಗೂ ಮರಾಠಿ ಭಾಷೆಗಳಲ್ಲಿ ಅಭಿನಯಿಸಿ ದೇಶ-ವಿದೇಶಗಳಲ್ಲಿ ಖ್ಯಾತಿ ಗಳಿಸಿದ್ದರು. ಯುರೋಪ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ತಮ್ಮ ಅಭಿನಯದ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ್ದರು.

ಆಗಸ್ಟ್ 2ರಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಉದ್ಘಾಟಿಸಲಿದ್ದು, ರಾಘವ ಮೆಮೋರಿಯಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನ ಹಿರಿಯ ರಂಗಕರ್ಮಿ ಹುಲುಗಪ್ಪ ಕಟ್ಟೀಮನಿ ಅವರಿಗೆ ಕನ್ನಡ ರಾಜ್ಯ ರಾಘವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಬಳಿಕ ಸವದತ್ತಿಯ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯಿಂದ 'ನೆಲ ಮುಗಿಲು' ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.
ಆಗಸ್ಟ್ 3ರಂದು ಸಂಜೆ 6 ಗಂಟೆಗೆ ನಡೆಯುವ ಸಮಾರಂಭದ ಅಧ್ಯಕ್ಷತೆಯನ್ನು ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ. ಕೋಟೇಶ್ವರ ರಾವ್ ವಹಿಸಲಿದ್ದು, ಆಕಾಶವಾಣಿಯ ಉನ್ನತ ಶ್ರೇಣಿ ವ್ಯಾಖ್ಯಾತೃ ಡಾ. ಜೆ. ಶ್ಯಾಮಸುಂದರ ಶಾಸ್ತ್ರಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವೇಳೆ ಸಿಕಂದ್ರಾಬಾದ್‌ನ ವಲ್ಲೂರು ಶ್ರೀಹರಿರಾವ್ ಅವರಿಗೆ ತೆಲುಗು ರಾಜ್ಯ ರಾಘವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಅನಂತಪುರದ ಲಲಿತ ಕಲಾ ಪರಿಷತ್ ತಂಡದಿಂದ 'ಶಕುನಿ' ತೆಲುಗು ಪೌರಾಣಿಕ ಪದ್ಯ ನಾಟಕ ಪ್ರದರ್ಶನಗೊಳ್ಳಲಿದೆ.
ಎರಡು ದಿನಗಳ ಕಾಲ ನಡೆಯುವ ಈ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
