ಕೊಪ್ಪಳ ಸೆಪ್ಟೆಂಬರ್ 25 ಜಿಲ್ಲಾಧಿಕಾರಿಗಳಾದ ಡಾ. ಸುರೇಶ್ ಬಿ. ಹಿಟ್ನಾಳ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವರ್ಣಿತ್ ನೇಗಿ ಅವರು ಸೆಪ್ಟೆಂಬರ್ 25ರಂದು ಗ್ರಾಮೀಣ ಭಾಗದಲ್ಲಿ ಪ್ರವಾಸ ಕೈಗೊಂಡು ಬರ ಪರಿಸ್ಥಿತಿಯ ಅವಲೋಕನ ಮಾಡಿದರು.
ಬೆಳಿಗ್ಗೆ 10.30ಕ್ಕೆ ಕನಕಗಿರಿ ತಾಲೂಕಿನ ಹುಲಿಹೈದರ್ ಹೋಬಳಿಯ ಹುಲಿಹೈದರ್ ಗ್ರಾಮದ ರೈತ ದೊಡ್ಡಬಸಪ್ಪ ಕನ್ನಾಳ ಅವರ ಜಮೀನಿಗೆ ಭೇಟಿ ನೀಡಿ, ಅಲ್ಲಿನ ತೊಗರಿ ಬೆಳೆಯನ್ನು ಪರಿಶೀಲಿಸಿದರು. ಬಳಿಕ ಹನುಮನಾಳ ಗ್ರಾಮದ ರೈತ ಮೂಖಪ್ಪ ತಂದೆ ಕರಿಯಪ್ಪ ಅವರ ಹೊಲಕ್ಕೆ ತೆರಳಿ, ಸಜ್ಜೆ ಬೆಳೆಯ ವೀಕ್ಷಣೆ ಮಾಡಿದರು.
ನಂತರ ಕನಕಗಿರಿ ಹೋಬಳಿಯ ತಿಪ್ಪನಾಳ ಗ್ರಾಮದ ರೈತ ಯಮನೂರಪ್ಪ ಅವರ ಕೃಷಿ ಭೂಮಿಯಲ್ಲಿನ ತೊಗರಿ ಬೆಳೆಯನ್ನು ಪರಿಶೀಲಿಸಿದರು. ಬಳಿಕ ಸುಳೇಕಲ್ ಗ್ರಾಮದ ರೈತ ಕನಕಪ್ಪ ಅವರ ಹೊಲದಲ್ಲಿ ಸೂರ್ಯಕಾಂತಿ ಬೆಳೆ ವೀಕ್ಷಣೆ ನಡೆಸಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ರೈತರೊಂದಿಗೆ ಮಾತನಾಡಿ, ಬರ ಪರಿಸ್ಥಿತಿಯಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಬೆಳೆ ಹಾನಿಗೆ ಪರಿಹಾರ ಹಾಗೂ ಬೆಳೆ ವಿಮೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನಂತರ ಕನಕಗಿರಿ ಹೋಬಳಿ ವ್ಯಾಪ್ತಿಯ ಕಲಕೇರಾ ಕೆರೆಗೆ ಭೇಟಿ ನೀಡಿ, ವಿಬಿಜಿರಾಮ್ ಜೀ ಯೋಜನೆಯಡಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿಯ ವೀಕ್ಷಣೆ ಮಾಡಿ ಕೂಲಿಕಾರರಿಂದ ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಕನಕಗಿರಿ ತಹಶೀಲ್ದಾರರಾದ ಚಂದ್ರಶೇಖರ್ ಗಾಳಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ರಾಜಶೇಖರ್, ಸಹಾಯಕ ನಿರ್ದೇಶಕರಾದ ನಾಗೇಶ್ ಎಚ್. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ರೈತರು ಉಪಸ್ಥಿತರಿದ್ದರು.
Also read