ವಿಜಯನಗರ(ಹೊಸಪೇಟೆ)ಆ.4:
ಜಿಲ್ಲೆಯ ವಿವಿಧ ವಸತಿ ಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನ 6ನೇ ತರಗತಿ ಪ್ರವೇಶಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಖಾಂತರ ನಡೆದ 3 ಹಂತಗಳ ಸೀಟು ಹಂಚಿಕೆ ಪ್ರಕ್ರಿಯೆಯ ನಂತರ ಖಾಲಿ ಉಳಿದಿರುವ ಸ್ಥಾನಗಳಿಗೆ ಜಿಲ್ಲಾ ಮಟ್ಟದ ಸಮಿತಿಯ ಮೂಲಕ ಭರ್ತಿ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 10 ಕೊನೆ ದಿನವಾಗಿದೆ.
ಈಗಾಗಲೇ ದಾಖಲಾತಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಂದ ವರ್ಗಾವಣೆ ಬಯಸಿದಲ್ಲಿ, ಅದೇ ವರ್ಗ ಹಾಗೂ ಲಿಂಗವಾರು ಸ್ಥಾನಗಳು ಲಭ್ಯವಿದ್ದರೆ ಮಾತ್ರ ಅವಕಾಶ ನೀಡಲಾಗುತ್ತದೆ. ಜಿಲ್ಲೆಯ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಪ್ರಸ್ತುತ ಹಂಚಿಕೆಯಾಗಿರುವ ಶಾಲೆಯ ಪ್ರಾಂಶುಪಾಲರಿಗೆ ವರ್ಗಾವಣೆ ಮನವಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು.
ಕೆಇಎಯಿಂದ ಆಯ್ಕೆಯಾಗಿಯೂ ಕಾರಣಾಂತರಗಳಿAದ ಪ್ರವೇಶ ಪಡೆಯಲು ಸಾಧ್ಯವಾಗದ ಅಥವಾ ದಾಖಲಾತಿ ಮಾಡಿಕೊಳ್ಳದ ಅಭ್ಯರ್ಥಿಗಳಿಗೆ ನಿಯಮಾನುಸಾರ ಮೊದಲ ಆದ್ಯತೆ ನೀಡಲಾಗುತ್ತದೆ. ವಿಶೇಷ ವರ್ಗದಡಿ ಪ್ರವೇಶ ಪಡೆಯಬಯಸುವ ಅಥವಾ ಅರ್ಜಿ ತಿರಸ್ಕೃತಗೊಂಡಿರುವ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ಮೀಸಲಾತಿ ಹಾಗೂ ವಿಶೇಷ ವರ್ಗದ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಪ್ರಮಾಣ ಪತ್ರಗಳನ್ನು ಲಗತ್ತಿಸದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ಪೋಷಕರ ಮಕ್ಕಳಿಗೆ ಮತ್ತು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಕ್ಕಳಿಗೆ ರಾಜ್ಯದ ಯಾವುದೇ ವಸತಿ ಶಾಲೆಯಲ್ಲಿ ಖಾಲಿ ಇರುವ ಸ್ಥಾನಕ್ಕೆ ಲಿಂಗ, ವರ್ಗ ಅಥವಾ ಆರ್ಥಿಕ ಮಿತಿಯನ್ನು ಪರಿಗಣಿಸದೆ ನೇರವಾಗಿ ಪ್ರವೇಶ ಕಲ್ಪಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ ಸಮಾಜ ಕಲ್ಯಾಣ ಇಲಾಖೆ ನ್ಯಾಷನಲ್ ಕಾಲೇಜು ಹಿಂಭಾಗ, ವಿದ್ಯಾನಗರ ಹೊಸಪೇಟೆ ಅಥವಾ ತಮ್ಮ ಸಮೀಪದ ವಸತಿ ಶಾಲೆಗೆ ಸಲ್ಲಿಸಿ ಸ್ವೀಕೃತಿ ಪಡೆಯಬಹುದು ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ. ಎ ಕಾಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
