ಬಳ್ಳಾರಿ,ಆ.12
ತಾಲೂಕಿನ ಮುಂಡರಗಿ ಕೈಗಾರಿಕಾ ಪ್ರದೇಶದ (ಹಂತ-1) ವ್ಯಾಪ್ತಿಯಲ್ಲಿನ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್ ಗಳನ್ನು ಕಂದಾಯ ಹಾಗೂ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ತೆರವುಗೊಳಿಸಲಾಗಿದೆ.
ಮುಂಡರಗಿ ಗ್ರಾಮದ ಸರ್ವೇ ಸಂಖ್ಯೆ 177/2 ರ ವ್ಯಾಪ್ತಿಯ 1.07 ಎಕರೆ ಸರ್ಕಾರಿ ಜಮೀನನ್ನು ಅತಿಕ್ರಮಿಸಿ ಅನಧಿಕೃತವಾಗಿ ಶೆಡ್ ನಿರ್ಮಿಸಲಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ, ಬುಧವಾರ ಬೆಳಿಗ್ಗೆ ಬೃಹತ್ ತೆರವು ಕಾರ್ಯಾಚರಣೆ ನಡೆಸಿ, ಅನಧಿಕೃತ ನಿರ್ಮಾಣಗಳನ್ನು ನೆಲಸಮಗೊಳಿಸಿದೆ. ಅದೇರೀತಿಯಾಗಿ ಸರ್ವೇ ನಂ.322 ರ 11.40 ಎಕರೆ ಖರಾಬು ಜಮೀನನ್ನು ಒತ್ತುವರಿ ಮಾಡಲಾಗಿತ್ತು. ಅದನ್ನು ತೆರವುಗೊಳಿಸಲಾಗಿದೆ.
ಕಾರ್ಯಾಚರಣೆಯ ವೇಳೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಅನಧಿಕೃತವಾಗಿ ಸರ್ಕಾರಿ ಆಸ್ತಿಗಳನ್ನು ಕಬಳಿಸಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ತೆರವುಗೊಳಿಸಿದ ಜಮೀನಿನಲ್ಲಿ ‘ಈ ಜಾಗವು ಸರ್ಕಾರಕ್ಕೆ ಸೇರಿದ್ದು, ಅತಿಕ್ರಮಣ ಮಾಡುವುದು ಶಿಕ್ಷಾರ್ಹ ಅಪರಾಧ’ ಎಂದು ಎಚ್ಚರಿಕೆ ಫಲಕವನ್ನು ಸಹ ಅಳವಡಿಸಲಾಗಿದೆ.
ತೆರವು ಕಾರ್ಯಾಚರಣೆ ವೇಳೆ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಬಳ್ಳಾರಿ ತಾಲ್ಲೂಕು ತಹಶೀಲ್ದಾರರಾದ ಟಿ.ರೇಖಾ ಸೇರಿದಂತೆ ಆರ್‌ಐ, ವಿಎಒ ಅಧಿಕಾರಿಗಳು, ಪೊಲೀಸ್ ಅಧಿಕಾರಿ- ಸಿಬ್ಬಂದಿ ಹಾಜರಿದ್ದರು.
